ಸ್ಥಳ ಪುರಾಣ






ಸುಮಾರು ಎರಡು ಸಾವಿರ ವರ್ಷಗಳಿಂದ ನಿರಂತರವಾಗಿ ಪೂಜಿಸಲ್ಪಡುತ್ತಿರುವ ಸ್ವಯಂ ಶ್ರೀಗುರುದತ್ತ ಪ್ರಸಾದಿತ ಶ್ರೀಚಕ್ರಾಂಕಿತ ದತ್ತಮೂರ್ತಿಯುಕ್ತ ರತ್ನಗರ್ಭ, ನವಪಾಷಾಣಯುಕ್ತ ಅವಿಮುಕ್ತ ದತ್ತಲಿಂಗ ಸ್ಥಿತವಾಗಿರುವ ದಿವ್ಯಕ್ಷೇತ್ರ ಇದಾಗಿದೆ. ಈ ಲಿಂಗದ ಮೇಲೆ ಸ್ವಯಂ ಆದಿಶಂಕರಾಚಾರ್ಯರು ತಮ್ಮ ಅಮೃತ ಹಸ್ತದಿಂದ ಶ್ರೀಚಕ್ರವನ್ನು ರಚಿಸಿದ್ದಾರೆ. ಈ ದಿವ್ಯಲಿಂಗವನ್ನು ಸಾಕ್ಷಾತ್ ದತ್ತಾತ್ರೇಯರು ಶ್ರೀಶೈಲ ಕ್ಷೇತ್ರದಲ್ಲಿ ಪಾಂಡವರ ವಂಶಜನಾದ ಶ್ರೀ ನಂದ ಮಹಾರಾಜನಿಗೆ ನೀಡಿದ್ದರು. (ನಂದ ಮಹಾರಾಜರು ಜನಮೋಯದಿಂದ 33ನೇ ತಲೆಮಾರಿನ ಚಕ್ರವರ್ತಿ)
ಇದು ಪ್ರಪಂಚದ ಒಂದೇ ಒಂದು ಸ್ವಯಂ ಪ್ರಕಾಶಿತ ಆಕಾಶ ವೃಷಭಾರೂಡ ಸ್ಪಟಿಕ ದತ್ತ ಆತ್ಮಲಿಂಗವನ್ನು ಪೂಜಿಸುವ ಪವಿತ್ರ ಸ್ಥಳವಾಗಿದೆ, ಇದು ಪಾಂಡವ ಕುಲದ ಅದೇ ನಂದ ಮಹಾರಾಜರಿಗೆ ಭಗವಾನ್ ಗುರು ದತ್ತರಿಂದ ಆಶೀರ್ವದಿಸಿದ ಶಾಶ್ವತ ಕೊಡುಗೆಯಾಗಿದೆ.
ಸಾಕ್ಷಾತ್ ಗುರುದತ್ತನೇ ತನ್ನ ನಿಜಪಾದ ಮುದ್ರೆಗಳನ್ನು ನಂದ ಮಹಾರಾಜನಿಗೆ ಪಾದುಕೆಗಳ ರೂಪದಲ್ಲಿ ಕರುಣಿಸಿರುವ ಅವಿಮುಕ್ತ ದತ್ತ ಪಾದುಕೆಗಳು ಸ್ಥಿತವಾಗಿರುವ ಅವಿಮುಕ್ತ ದತ್ತ ಕ್ಷೇತ್ರ ಇದಾಗಿದೆ.
ಆದಿಗುರು ದತ್ತಾತ್ರೇಯರು ಅವಧೂತ ಸ್ಥಿತಿಯಲ್ಲಿ ಸ್ವಾಮಿನಾಥನಾದ ಸಾಕ್ಷಾತ್ ಜ್ಞಾನಶಕ್ತಿ ಸುಬ್ರಹ್ಮಣ್ಯೇಶ್ವರನಿಗೆ ಪರಮೋಚ್ಛ ಅವಸ್ಥೆಯ ಅವಧೂತ ಗೀತೆಯನ್ನು ಬೋಧಿಸಿದ ದತ್ತಾವಧೂತ ಕ್ಷೇತ್ರ ಇದಾಗಿದೆ.
ಆದಿ ಶಂಕರಾಚಾರ್ಯರಿಗೆ ಗುರುದತ್ತನು ಸೂರ್ಯಮಂಡಲದಲ್ಲಿ ದರ್ಶನವಿತ್ತು ದತ್ತ ಸಹಸ್ರನಾಮವನ್ನು ಉಪದೇಶಿಸಿದ ಧಾತ್ರೀವನ ಪವಿತ್ರ ಕ್ಷೇತ್ರ ಇದಾಗಿದೆ.
ಪಾಂಡವರ ವಂಶಜನಾದ ನಂದ ಮಹಾರಾಜನಿಗೆ ಗುರುದತ್ತನು ಮೋಕ್ಷವನ್ನಿತ್ತ ಪರಮಪಾವನ ಕ್ಷೇತ್ರ ಇದಾಗಿದೆ. ದಕ್ಷಿಣ ಪಿನಾಕಿನಿ ನದಿಯ ಪೂರ್ವತಟದ ನವವಟಕ್ಷೇತ್ರವೆಂಬ ಸಿದ್ಧ ಕ್ಷೇತ್ರ ಇದಾಗಿದೆ. ಇಲ್ಲಿ ನಿತ್ಯವೂ ನವನಾಥರು ಸೂಕ್ಷ್ಮ ರೂಪದಲ್ಲಿ ಬಂದು ದತ್ತ ಮಹಾರಾಜರನ್ನು ಪೂಜಿಸಿ, ಕ್ಷೇತ್ರ ಸಂಚಾರ ಮಾಡಿ ಹೋಗುತ್ತಾಾರೆ. ಇಲ್ಲಿನ ಒಂಭತ್ತು ದೈವೀ ವೃಕ್ಷಗಳು ನವನಾಥರ ಪ್ರತೀಕಗಳಾಗಿವೆ.
ಆದಿಗುರು ದತ್ರಾತ್ರೇಯ ಪರಂಪರಾನುಗತ ಪ್ರಣವ ಪೀಠದ ಹದಿನಾರನೇ ಸದ್ಗುರುಗಳಾದ ಶ್ರೀ ಶ್ರೀ ಶ್ರೀ ರಾಮಾನಂದ ಸ್ವಾಮಿಯವರು ದತ್ತ ದರ್ಶನವನ್ನು ಪಡೆದು ಸಮಾಧಿಸ್ಥರಾಗಿ ನೆಲೆಸಿರುವ ದಿವ್ಯ ತೀರ್ಥಕ್ಷೇತ್ರ ಇದಾಗಿದೆ.