ಇತಿಹಾಸ

ಆದಿ ಗುರು ಶ್ರೀಶ್ರೀಶ್ರೀ ದತ್ತಾಾತ್ರೇಯ ಪ್ರಭುವಿನಿಂದ ಸ್ಥಾಪಿಸಲ್ಪಟ್ಟ ಪ್ರಣವ ಪೀಠವು ಒಂದು ಸನಾತನವಾದ ಗುರು ಪರಂಪರೆಯುಳ್ಳ ಸದ್ಗುರು ಪೀಠವಾಗಿದೆ. ಇಪ್ಪತ್ತನೆಯ ಶತಮಾನದ ಮಧ್ಯ ಭಾಗದಲ್ಲಿ ಪ್ರಣವ ಪೀಠ ಗುರು ಪರಂಪರೆಯ ಹದಿನಾರನೇ ಸದ್ಗುರುಗಳಾದ ಶ್ರೀಶ್ರೀಶ್ರೀ ರಾಮಾನಂದಸ್ವಾಾಮಿಯವರು ಈ ಪ್ರಣವಪೀಠವನ್ನು ಪುನರುದ್ಧರಿಸಿ ಬೆಂಗಳೂರಿನ ಬಳಿ ಇರುವ ಪುರಾತನ ನವಸಾಲನಗರವೆಂಬ ಖ್ಯಾತಿಯ ಹೊಸಕೋಟೆ ನಗರದಲ್ಲಿ ಶ್ರೀಮದ್ ದತ್ತಾತ್ರೇಯ ಆಶ್ರಮ ಪ್ರಾರ್ಥನಾ ಮಂದಿರವನ್ನು ನಿರ್ಮಿಸಿ ಹೊಸಕೋಟೆ ನಗರವನ್ನು ಅವಿಮುಕ್ತ ದತ್ತ ಕ್ಷೇತ್ರವನ್ನಾಗಿ ರೂಪಿಸಿದ್ದಾರೆ.

ಶ್ರೀ ದತ್ತಾತ್ರೇಯ ಪ್ರಭುವು ಆದಿಗುರುವಾಗಿ ಪ್ರಣವ ಸ್ವರೂಪನಾಗಿ ಪ್ರಣವ ತತ್ತ್ವದ ಅಧಾರವಾಗಿ ಅತ್ರಿ ಅನುಸೂಯ ಋಷಿ ದಂಪತಿಗಳಿಗೆ ವರಪುತ್ರನಾಗಿ ಅವತರಿಸಿದನು. ಕರ್ಮಯೋಗ, ಭಕ್ತಿಯೋಗ, ಹಠಯೋಗ ಹಾಗೂ ಜ್ಞಾನಯೋಗ ಸಾಧನೆಗಳಿಂದ ಎಲ್ಲರ ಉದ್ದಾರಕ್ಕಾಗಿ ವಿವಿಧ ಪಂಥಗಳನ್ನು ಈ ಪ್ರಪಂಚದಲ್ಲಿ ಪ್ರಚಾರ ಮಾಡಿರುವನು. ಅವುಗಳಲ್ಲಿ ಅತಿ ಮುಖ್ಯವಾಗಿ ಗೌಪ್ಯವೂ, ಶ್ರೇಷ್ಠವೂ ಆದ ಜ್ಞಾನಪಂಥ ಗುರುಪೀಠವೇ ಈ ಪ್ರಣವ ಪೀಠ.

ಆದಿಯಲ್ಲಿ ಗುರುದತ್ತನಿಂದ ಪ್ರಾರಂಭವಾಗಿ ಇಂದಿನವರೆಗೆ ಈ ಜ್ಞಾನ ಮಾರ್ಗದಲ್ಲಿ ಅನೇಕಾನೇಕ ಶಾಖೋಪಶಾಖೆಗಳು ಬೆಳೆದು ಬಂದಿರುತ್ತದೆ. ಅದರಲ್ಲಿನ ಒಂದು ಶಾಖೆಯೇ ನಮ್ಮ ಈ ಪ್ರಣವ ಪೀಠದ ಗುರುಪರಂಪರೆ. ಈ ಪರಂಪರೆಯ ಹದಿನಾರನೆಯ ಸದ್ಗುರುಗಳೇ ಶ್ರೀಶ್ರೀಶ್ರೀ ರಾಮಾನಂದಸ್ವಾಮಿಯವರು. ಪ್ರಸ್ತುತ ಈ ಪೀಠದಲ್ಲಿ ಹದಿನೆಂಟನೆಯ ಸದ್ಗುರುಗಳಾಗಿ ಶ್ರೀಶ್ರೀಶ್ರೀ ಮಾತೇ ಮುಕ್ತಾಂಬಿಕೇ ದೇವಿಯವರು ಗುರುದತ್ತನ ಸೇವೆ ಸಲ್ಲಿಸುತ್ತಿದ್ದಾರೆ. ಆಬಾಲ ವೃದ್ಧರಾದಿಯಾಗಿ ಸ್ತ್ರೀ ಪುರುಷರ ಬೇಧವಿಲ್ಲದೆ ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರರಾದಿಯಾಗಿ ವರ್ಣಬೇಧವಿಲ್ಲದೇ ಬ್ರಹ್ಮಚಾರಿ ಗೃಹಸ್ಥಾದಿ ಆಶ್ರಮ ಬೇಧವಿಲ್ಲದೇ ಎಲ್ಲರು ಆಚರಿಸಲು ಹಾಗೂ ಸಾಧನೆಯಲ್ಲಿ ತೊಡಗಲು ಈ ಪ್ರಣದ ಪೀಠದ ಜ್ಞಾನ ಮಾರ್ಗದಲ್ಲಿ ಸಮಾನವಾದ ಅವಕಾಶವಿರುತ್ತದೆ.

ಪೀಠಾಧ್ಯಕ್ಷರಾದ ಸದ್ಗುರುಗಳು ಶ್ರೀ ಗುರುದತ್ತನಂತೆ ನಿತ್ಯ ಸಂಚಾರಿಗಳೂ ಆಶ್ರಮ ವಾಸಿಗಳೂ ಆಗಿ ಪ್ರತಿ ಮಾನವ ಹೃದಯದಲ್ಲಿ ಅಧ್ಯಾತ್ಮಿಕ ಜ್ಯೋತಿ ಬೆಳಗಿಸುವ ಕಾರ್ಯವನ್ನು ಕೈಗೊಳ್ಳತ್ತಾರೆ.

ಪ್ರಣವ ಪೀಠದ ಗುರು ಪರಂಪರೆಯ ಹದಿನಾರನೇ ಸದ್ಗುರುಗಳಾಗಿದ್ದ ಸದ್ಗುರು ಶ್ರೀಶ್ರೀಶ್ರೀ ರಾಮಾನಂದಸ್ವಾಮಿಯವರು ತಮ್ಮ ಜೀವಿತ ಕಾಲದಲ್ಲಿ ಗುರುಭಕ್ತರ ಉದ್ದಾರಕ್ಕಾಗಿ ಮತ್ತು ಅನುಕೂಲಕ್ಕಾಗಿ ಸನಾತನವಾದ ಪ್ರಣವ ಪೀಠದ ಪರಂಪರೆಗೆ ತಕ್ಕಂತೆ ಹೊಸಕೋಟೆ ನಗರದ ಹೊರವಲಯದಲ್ಲಿ (ಈಗಿನ ಸರ್.ಎಂ.ವಿ. ಬಡಾವಣೆಯಲ್ಲಿ)

ಶ್ರೀಮದ್ ದತ್ತಾತ್ರೇಯ ಆಶ್ರಮ ಪ್ರಾರ್ಥನಾ ಮಂದಿರವನ್ನು ನಿರ್ಮಿಸಿ ತಮ್ಮ ತಪೋನಿಷ್ಠೆಯಿಂದ ಹಾಗೂ ಹೊಸಕೋಟೆ ನಗರದ ಅಧಿದೇವತೆಯಾದ ಶ್ರೀ ಅವಿಮುಕ್ತೇಶ್ವರನ ದಿವ್ಯಾನುಗ್ರಹದಿಂದ ಈ ಭೂಮಿಯನ್ನು ಪಾವನಗೊಳಿಸಿ ಹೋಸಕೋಟೆ ನಗರವನ್ನು ಅವಿಮುಕ್ತ ದತ್ತ ಕ್ಷೇತ್ರವನ್ನಾಗಿಸಿ, ಶ್ರೀಮದ್ ಆದಿಗುರು ದತ್ತಾತ್ರೇಯ ಪರಂಪರಾನುಗತ ನಿರ್ಗುಣ ಮಹಾ ಸಂಸ್ಥಾನ ವನ್ನು ಸ್ಥಾಪಿಸಿ ಪ್ರಣವ ಪೀಠವೆಂಬ ಸನಾತನ ಗುರುಪರಂಪರಾ ಪೀಠವನ್ನು ಪುನರ್ ಪ್ರತಿಷ್ಠಾಪಿಸಿರುತ್ತಾರೆ. ಸದ್ಗುರು ಶ್ರೀಶ್ರೀಶ್ರೀ ರಾಮಾನಂದಸ್ವಾಮಿಯವರ ಮಹಾ ಸಮಾಧಿಯ ನಂತರ ದಿನಾಂಕ 24-06-1998 ರಿಂದ ಪ್ರಣವ ಪೀಠದ ಹದಿನೇಳನೇ ಸದ್ಗುರುಗಳಾಗಿ ಶ್ರೀಶ್ರೀಶ್ರೀ ಮಾಧವಾನಂದಸ್ವಾಮಿಯವರ ಪೀಠಾಧ್ಯಕ್ಷರಾಗಿ ಸೇವೆ ಸಲ್ಲಿಸಿ ದಿನಾಂಕ 29-08-2005 ರಂದು ಮಹಾ ನಿರ್ವಾಣವನ್ನು ಹೊಂದಿರುತ್ತಾರೆ.

ಸದ್ಗುರು ಶ್ರೀಶ್ರೀಶ್ರೀ ರಾಮಾನಂದಸ್ವಾಮಿಯವರ ಪೂರ್ವ ನಿರ್ದೇಶನ ನಿಯಮಾವಳಿಯಂತೆ ಹಾಗೂ ಶ್ರೀಶ್ರೀಶ್ರೀ ರಾಮಾನಂದಸ್ವಾಮಿಯವರ ಸಂಕಲ್ಪ, ಇಚ್ಚೆ ಹಾಗೂ ಅಪ್ಪಣೆಯಂತೆ ದಿನಾಂಕ: 29-08-2005 ರಿಂದ ಪ್ರಸ್ತುತ ಸದ್ಗುರು ಶ್ರೀಶ್ರೀಶ್ರೀ ಮಾತೇ ಮುಕ್ತಾಂಬಿಕೇದೇವಿಯವರು (ಶ್ರೀಶ್ರೀಶ್ರೀ ಲಕ್ಷ್ಮೀ ಬ್ರಹ್ಮಾನಂದಮ್ಮಣ್ಣಿಯವರು ಅಲಿಯಾಸ್ ಶ್ರೀಮತಿ ಮಾಚಲ್ಲ ಲಕ್ಷ್ಮೀನರಸಮ್ಮ ಆರ್) ಪ್ರಣವ ಪೀಠದ ಹದಿನೆಂಟನೇ ಸದ್ಗುರುಗಳಾಗಿ ಪೂರ್ಣಾಧಿಕಾರದೊಂದಿಗೆ ಪೀಠಾಧ್ಯಕ್ಷರಾಗಿ ಕಾರ್ಯನಿರ್ವಹಿಸು ತ್ತಿದ್ದಾರೆ. ಶ್ರೀಮತಿ ಮುಕ್ತಾಂಬಿಕೇದೇವಿಯವರು ಶ್ರೀ ಆಶ್ರಮದ ಸಮಾಜದ ಹಾಗೂ ಟ್ರಸ್ಟಿನ ಅಭಿವೃದ್ಧಿಗಾಗಿ ಹಗಲಿರುಳೆನ್ನದೆ ತಮ್ಮ ತಪಶಕ್ತಿಯಿಂದ ಹಾಗೂ ದೈವ ಶಕ್ತಿಯಿಂದ ಅವಿತರವಾಗಿ ಶ್ರಮಿಸುತ್ತಾ ಶಿಷ್ಯವೃಂದಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ.

knKannada